ದೂಧ್ ಸಾಗರ್ ರೈಲ್ವೆ ಹಳಿಯ ಚಾರಣ
ಜಲಲ.... ಜಲಲ.... ಜಲಧಾರೆ
ಸುವ್ವಿ ಸುವ್ವಾಲೆ ಲೇ ಲೇ .....
ಎತ್ತ ಕಣ್ಣು ಹಾಯಿಸಿದರೂ ಹಚ್ಚ ಹಸಿರಿನ ಕಾನನ!, ಜುಳು ಜುಳು ಹರಿಯುವ ಜಲಧಾರೆ! ಅಲ್ಲೊಂದು ಇಲ್ಲೊಂದು ದುಮ್ಮಿಕ್ಕಿ ಬೀಳುವ ಜಲಪಾತಗಳೇ ! ನಿಸರ್ಗದ ಎಲ್ಲಾ ಸೊಬಗನ್ನು ತನ್ನಲ್ಲಿಯೇ ಅಡಗಿಸಿ ಕೊಂಡಿದೆಯೋ ಎನ್ನುವ ಭಾವ! ಹೂ೦ ! ಹೌದು ಮಾಂಡವಿ ನದಿಯು ಬೆಟ್ಟದ ತುದಿಯಿಂದ ಧುಮ್ಮಿಕ್ಕಿ ಹರಿದು ದೂಧ್ ಸಾಗರ್ ಎಂದು ನಾಮಂಕಿತವಾಗಿದ್ದು, ಹೆಸರೇ ಸೂಚಿಸುವಂತೆ ಅದು ಕ್ಷಿರಸಾಗರವೇ! ಇದುವೇ ದೂಧ್ ಸಾಗರ್.
ನನ್ನ ಪ್ರವಾಸದ ಕಥನ ಮೊದಲ ಬಾರಿಗೆ ಮಾತೃಭಾಷೆಯಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಕೆಲವೊಂದು ಭಾವನೆಗಳನ್ನು, ಅನುಭವಗಳನ್ನು ಮಾತೃಭಾಷೆಯಲ್ಲಿ ಹಂಚಿಕೊಳ್ಳುವುದು ಸೂಕ್ತ ಎಂದೆನಿಸಿತು. ಈ ಪ್ರವಾಸ ಮನಸ್ಸಿಗೆ ಮುದ, ಆಹ್ಲಾದ! ಎರಡು ದಿನ ಪ್ರಕೃತಿಯ ಮಡಿಲಲ್ಲಿ ಲೀನವಾಗಿದ್ದು ಎಂದಿಗೂ ಮರೆಯಲಾಗದ ಅನುಭವ! ಆದರೆ ಅದಕ್ಕಿಂತ ಮಿಗಿಲಾಗಿ ಅಲ್ಲಿಂದ ನೋವನ್ನೂ ಹೊತ್ತು ತಂದೆಯೇನೋ ಅನಿಸುತ್ತಿದೆ. ಅಷ್ಟು ಸುಂದರ ಮಡಿಲನ್ನು ಜನರು ತಮ್ಮ ಚಟವನ್ನು ತೀರಿಸಿಕೊಳ್ಳಲು ತುಂಬಾ ಹೊಲಸು ಮಾಡುತ್ತಿದ್ದಾರೆ. ಪ್ರಕೃತಿಯ ಸೊಬಗನ್ನು ಆಸ್ವಾದಿಸುವ ಬದಲು ನಗರೀಕರಣದ ಮೋಜು ಮಸ್ತಿಯಿಂದ ತುಂಬಾ ಕಲುಷಿತ ಗೊಳಿಸುತ್ತಿದ್ದಾರಲ್ಲ ಅಂತ ಅಪಾರ ಬೇಸರ!
ಬೆಂಗಳೂರು ಅಸೆಂಡರ್ ಪರಿಚಯವಾದಗಿನಿಂದ ನನ್ನ ಜೀವನ ಶೈಲಿಯೇ ತಕ್ಕ ಮಟ್ಟಿಗೆ ಬದಲಿಸಿದೆ ಎಂದರೆ ಸುಳ್ಲಾಗಲಾರದು. ಕೇವಲ ಸೋಮಾರಿತನದಲ್ಲಿಯೇ ವಾರಾಂತ್ಯವನ್ನು ಕಳೆಯುತ್ತಿದ್ದ ನನಗೆ ನಿಸರ್ಗದ ಮಡಿಲಲ್ಲಿ ನೈಜ ಪ್ರಕೃತಿಯನ್ನು ಸವಿಯೋ ಅವಕಾಶ ಕಲ್ಪಿಸಿದೆ.
ದೂಧ್ ಸಾಗರ್ ಚಾರಣ, ಚಾರಣಿಗರಿಗೆ ಮೊದಲಿನಿಂದ ಬಹು ಬೇಡಿಕೆಯಿರುವ ಸ್ಥಳ. ಈ ಸಂಘಟನೆಯ ರೂವಾರಿ ಮಹಮದ್ ರಫಿ. ಈ-ಮೇಲ್ ಬಂದ ಕೆಲವೇ ಕ್ಷಣಗಳಲ್ಲಿ ಸ್ವಲ್ಪವೂ ಆಲೋಚಿಸದೇ ನೋಂದಣಿ ಮಾಡಿಸಿಯೇ ಬಿಟ್ಟೆ. ಅದೃಷ್ಟಕ್ಕೆ ನನ್ನ ಹೆಸರೂ ಕೂಡ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಯಾಯ್ತು. ತಿಂಗಳ ಮುಂಚೆ ತಯ್ಯಾರಿಗಳು ಶುರುವಾದವು. ಪ್ರತಿ ಹಂತದಲ್ಲೂ ಸವಿಸ್ತಾರವಾದ ಮಾಹಿತಿಗಳನ್ನು ಕಳುಹಿಸುತ್ತಿದ್ದ ರಫಿಯವರ ಸಂಘಟನಾ ಚಾತುರ್ಯ ಅಧ್ಭುತ! ಚಪ್ಪಲಿಯಿಂದ ಹಿಡಿದು, ಹಾಸಿಗೆ, ಉಡುಪು, ಟೆಂಟ್, ಊಟ ತಿಂಡಿ ಎಲ್ಲ ಅಗತ್ಯ ವಸ್ತುಗಳು ದೊರೆಯುವ ಸ್ಥಳ, ದರ, ಬ್ರಾಂಡ್, ಇತ್ಯಾದಿಗಳ ಕುರಿತು ಸಮಸ್ತ ವಿವರಗಳನ್ನು ನೀಡಿದ ರಫಿಯವರಿಗೆ ತುಂಬು ಹೃದಯದ ಧನ್ಯವಾದಗಳು.
05-07-2013 ರ ಪ್ರಯಾಣದ ದಿನ ಚೆನ್ನೈ ವಾಸ್ಕೋ ಎಕ್ಸ್ ಪ್ರೆಸ್ ರೈಲು ಕೆ. ಆರ್. ಪುರಂ ನಿಲ್ದಾಣದ ಮುಖಾಂತರ ಹಾದು ಹೋಗುವದರಿಂದ ಸ್ವಲ್ಪ ನೆಮ್ಮದಿಯಾಗಿದ್ದೆ. ಮನೆಯಿಂದ ಕೇವಲ 15 ನಿಮಿಷಗಳ ಪ್ರಯಾಣವಾದ್ದರಿಂದ ಯಾವುದೇ ಆತಂಕವಿರಲಿಲ್ಲ. ರೈಲು ನಿಗದಿತ ಸಮಯಕ್ಕೆ ಹೊರಡಲು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲವಾದ್ದರಿಂದ ಅಲ್ಲಿ ಸೇರಿದ್ದ ಚಾರಣಿಗರೆಲ್ಲರೂ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಮಯಾವಕಾಶವಾಯಿತು. ಎಲ್ಲಾ ಚಾರಣಿಗರೂ ಚಾರಣ ಪ್ರವೃತ್ತಿಯಲ್ಲಿ ಬಹಳ ಅನುಭವಸ್ಥರಾಗಿದ್ದು, ನಾನೊಬ್ಬನೇ ಚಾರಣ ರಂಗದ ಕೂಸಾಗಿದ್ದೆ. ರಾತ್ರಿ 9.50 ಕ್ಕೆ ಯಶವಂತಪುರ ರೈಲು ನಿಲ್ದಾಣ ರೈಲು ತಲುಪಿತು. ಸಾಕಷ್ಟು ಮಂದಿ ಸಹ ಚಾರಣಿಗರು ಈ ನಿಲುಗಡೆಯಲ್ಲೇ ಹತ್ತಿದರು. ಇವರಲ್ಲಿ ಕೆಲವು ಹೊಸಮುಖಗಳಾಗಿದ್ದರೆ, ಹಲವು ಪರಿಚಿತ ಮುಖಗಳಿದ್ದವು. ಮತ್ತೆ ಆ ನಿಲುಗಡೆಯಲ್ಲಿ ರೈಲು ಒಂದು ಗಂಟೆಯಷ್ಟು ಕಾಲ ನಿಂತಿತು. ಅನುಭವಗಳನ್ನು ಹಂಚಿಕೊಂಡು ವಟ ವಟ ಎನ್ನುತ್ತಿದ್ದ ಬಾಯಿಗಳು ಕಾಲ ಸರಿದಂತೆ ನಿದ್ರಾದೇವಿಯ ಅಣತಿಗೆ ಒಪ್ಪಿ ತೆಪ್ಪಗಾದವು.
06-07-2013
06-07-2013
ಬೆಳಿಗ್ಗೆ 6ಕ್ಕೆ ಕಣ್ಬಿಟ್ಟಾಗ, ವಯೋವೃದ್ಧ ಸರ್ಪ ಬುಸುಗುಡುತ್ತಾ ಚಲಿಸಲಾರದೆ ತೆವಳುತ್ತಿರುವಂತೆ, ರೈಲು ನಿಧಾನವಾಗಿ ಚಲಿಸುತ್ತಿತ್ತು. ಹುಬ್ಬಳ್ಳಿಯಲ್ಲಿ ತಿಂಡಿ ತಿಂದು, ರೈಲಿನ ಮುಂದಿನ ಹಾದಿ ಇನ್ನೂ 3 ಗಂಟೆಗಳು ಇವೆ ಎನ್ನುವಾಗ ಸಹ ಚಾರಣಿಗರಲ್ಲೊಬ್ಬರು, ಬ್ಲಫ್ ಮಾಸ್ಟರ್ ಎಂಬ ಕಾರ್ಡಿನ ಹೊಸ ಆಟದ ರುಚಿ ತೋರಿಸಿ, ಮೊದಲ ಹಂತದಲ್ಲಿ ಎಲ್ಲಾರೂ ವಿದ್ಯಾರ್ಥಿಗಳಾಗಿದ್ದೆವು. ಆದರೆ, ಮುಂದಿನ ರೌಂಡ್ ಗಳಲ್ಲಿ ನಿಜವಾದ ಬ್ಲಫ್ ಮಾಸ್ಟರ್ ಗಳೇ ಆಗಿದ್ದೆವು.
ಕ್ಯಾಸಲ್ ರಾಕ್ ಒಂದು ಪುಟ್ಟ ನಿಲ್ದಾಣ. ಗಾಡಿ ಅಲ್ಲಿ ನಿಂತಾಗ ಬೆಳಿಗ್ಗೆ 10-30. ಸಾಮಾನ್ಯವಾಗಿ ರೈಲು ಹಳಿಯ ಚಾರಣ ಮಾಡುವವರಿಗೆಲ್ಲ ಇದೇ ಆರಂಭದ ಕುರುಹು. ಪೂರ್ತಿ ರೈಲು ಖಾಲಿಯಗಿದೆಯೋ ಅನ್ನಿಸ್ತಿತ್ತು. ಏನಿಲ್ಲ ಅಂದ್ರು ಸರಿ ಸುಮಾರು ಇನ್ನೂರರಿಂದ ಮುನ್ನೂರು ಜನರು ಇಳಿದಿರಬಹುದು. ಎಲ್ಲರು ಮುಂದಿನ ನಡಿಗೆಗೆ ಸಿದ್ಧರಾದೆವು. ರಫಿ ಈ ಚರಣದ ಸಂಕ್ಷಿಪ್ತ ವರದಿಯ ಜೊತೆಗೆ ಕೆಲವೊಂದು ಮಹತ್ವದ ಸಲಹೆಗಳನ್ನು ನೀಡಿದರು. ರೈಲು ಹಳಿಯ ಉದ್ದಕ್ಕೆಲ್ಲ ಚಾರಣಿಗರೇ. ಆ ದೃಶ್ಯ ಹೇಗಿತ್ತು ಅಂದ್ರೆ ಸಮೂಹ ವಲಸೆಯನ್ನು ಬಿಂಬಿಸುತಿತ್ತು.
ನಿಸರ್ಗದ ರಮಣೀಯತೆ ಅಲ್ಲಿಂದಲೇ ಪ್ರಾರಂಭವೇನೋ ಎನ್ನುವ ಹಾಗಿತ್ತು. ಎತ್ತ ನೋಡಿದರು ಹಸಿರೇ ಮೈದುಂಬಿ ಕೊಂಡಿತ್ತು.
ಕೊಂಚ ದೂರ ನಡೆಯುವಷ್ಟರಲ್ಲಿ ಒಂದು ಪುರಾತನ ಕಾಲದ ಗೋಡೆ ಕಿಟಕಿಗಳ ಹಾಗೆ ಕಾಣುವ ಸ್ಮಾರಕ. ರಫಿ, ಬ್ರಿಟಿಷರ ಕಾಲದಲ್ಲಿಯ ರೈಲು ನಿಲ್ದಾಣ ಅಂತ ಪರಿಚಯಿಸಿದರು. ಎಲ್ಲರ ಕೈಯಲ್ಲೂ ಬಗೆ ಬಗೆಯ ಕ್ಯಾಮೆರಾಗಳೇ! ವಿವಿಧ ಭಂಗಿ ಚಿತ್ತದ ಪೋಸ್ ಕೊಡುವವರೆ. ಅಲ್ಲಿಂದ ಬೆಳೆಸಿದೆವು ಮುಂದಿನ ಪಯಣ.
ಕೊಂಚ ದೂರ ನಡೆಯುವಷ್ಟರಲ್ಲಿ ಒಂದು ಪುರಾತನ ಕಾಲದ ಗೋಡೆ ಕಿಟಕಿಗಳ ಹಾಗೆ ಕಾಣುವ ಸ್ಮಾರಕ. ರಫಿ, ಬ್ರಿಟಿಷರ ಕಾಲದಲ್ಲಿಯ ರೈಲು ನಿಲ್ದಾಣ ಅಂತ ಪರಿಚಯಿಸಿದರು. ಎಲ್ಲರ ಕೈಯಲ್ಲೂ ಬಗೆ ಬಗೆಯ ಕ್ಯಾಮೆರಾಗಳೇ! ವಿವಿಧ ಭಂಗಿ ಚಿತ್ತದ ಪೋಸ್ ಕೊಡುವವರೆ. ಅಲ್ಲಿಂದ ಬೆಳೆಸಿದೆವು ಮುಂದಿನ ಪಯಣ.
ಈ ಚಾರಣದ ವಿಶೇಷತೆಯೆಂದರೆ ಯಾರು ದಾರಿ ತಪ್ಪುವ ಸಾಧ್ಯತೆಗಳೇ ಇಲ್ಲ. ಆರಂಭದಿಂದಲೂ ಅಂತ್ಯದವರೆಗೂ ರೈಲು ಹಳಿಗಳೇ ಮಾರ್ಗದರ್ಶಿ. ಎಲ್ಲ ಚಾರಣಿಗರು ಗುಂಪು ಗುಂಪುಗಳಾಗಿ ಹೊರಟೆವು.
ಸ್ವಲ್ಪ ದೂರ ನಡೆಯುತ್ತಲೇ ಮೊದಲನೆಯ ಟನೆಲ್ (ಸುರಂಗ) ಬಂದೇಬಿಡ್ತು. ಈ ಚಾರಣದ ಇನ್ನೊಂದು ವಿಶೇಷತೆಯೆಂದರೆ ಒಟ್ಟು ೧೧ ಟನೆಲ್ ಗಳು ಬಳಸಿಕೊಂಡು ಹೋಗಬೆಕು. ಈ ಟನೆಲ್ಗಳಲ್ಲಿ ಬ್ಯಾಟರಿ ಬೇಕೇ ಬೇಕು, ಇಲ್ಲವಾದಲ್ಲಿ ನಡೆಯೋದು ತುಂಬಾ ಕಷ್ಟ. ಪಾರು ಮಾಡಿ ಆಚೆ ಬಂದಾಗ ಏನೋ ಖುಷಿ, ಹೊಸ ಪ್ರಪಂಚ. ಹೊರಟಾಗಲೇ ಮೋಡದ ಜೊತೆಗೆ ತುಂತುರು ಮಳೆಯ ಸಿಂಚನವು ಇತ್ತು. ಉದ್ದಕ್ಕೂ ಮಳೆರಾಯ ಸತತವಾಗಿ ಹೊಯ್ಯುತಲೇ ಇದ್ದ.
ತಿರುವುಗಳು ಬಳಸುತ್ತಾ ಟನೆಲ್ ದಾಟುತ್ತ, ಅಕ್ಕ ಪಕ್ಕದ ಬಂಡೆಗಳ ಮೇಲೆಲ್ಲಾ ಬಿದ್ದ ನೀರು ಚಿಕ್ಕಝರಿಗಳಾಗಿ ಹರಿಯುತ್ತಿದ್ದುದನ್ನು ವಿಕ್ಷಿಸುತ್ತ ಮುಂದೆ ಸಾಗಿದೆವು. ಎಲ್ಲರು ವಿವಿಧ ಭಂಗಿಯ ಫೋಟೋ ತೆಗೆಸಿಕೊಳ್ಳೋದರಲ್ಲಿ ಬ್ಯುಸಿಯಾಗಿದ್ದರು. ನೋಡ ನೋಡುತ್ತಲೇ ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಕಾಲಿಟ್ಟೆವು.
ಮಧ್ಯಾಹ್ನ 2 ಗಂಟೆಯ ಸಮಯ ಕರಂಜೋಲ್ ನಿಲ್ದಾಣಕ್ಕೆ ಬಂದು ಸೇರಿದೆವು. ಮನೆಯಿಂದ ತಂದ ಚಪಾತಿಯನ್ನು ಸಹ ಚಾರಣಿಗರೊಂದಿಗೆ ಹಂಚಿಕೊಂಡು, ಅವರು ತಂದಿದ್ದ ಬುತ್ತಿಯ ರುಚಿ ಸವಿಯುತ್ತ ಊಟ ಮುಗಿಸಿದೆ. ಅಲ್ಲಿಯೇ ಸ್ವಲ್ಪ ಹೊತ್ತು ವಿಶ್ರಾಂತಿ ತಗೊಂಡು ಮುಂದೆ ಪ್ರಯಾಣ ಬೆಳೆಸಿದೆವು.
ಮಧ್ಯಾಹ್ನ 2 ಗಂಟೆಯ ಸಮಯ ಕರಂಜೋಲ್ ನಿಲ್ದಾಣಕ್ಕೆ ಬಂದು ಸೇರಿದೆವು. ಮನೆಯಿಂದ ತಂದ ಚಪಾತಿಯನ್ನು ಸಹ ಚಾರಣಿಗರೊಂದಿಗೆ ಹಂಚಿಕೊಂಡು, ಅವರು ತಂದಿದ್ದ ಬುತ್ತಿಯ ರುಚಿ ಸವಿಯುತ್ತ ಊಟ ಮುಗಿಸಿದೆ. ಅಲ್ಲಿಯೇ ಸ್ವಲ್ಪ ಹೊತ್ತು ವಿಶ್ರಾಂತಿ ತಗೊಂಡು ಮುಂದೆ ಪ್ರಯಾಣ ಬೆಳೆಸಿದೆವು.
ದಾರಿಯುದ್ದಕ್ಕೂ ಮಳೆರಾಯ ಬಿಟ್ಟು ಬಿಟ್ಟು ಮನಸೋಚ್ಛೆ ಹೊಯ್ಯುತಲೇ ಇದ್ದ. ಮಳೆಯನ್ನು ಆಸ್ವಾದಿಸೋದೇ ಈ ಚಾರಣದ ವಿಶೇಷತೆ. ಒಂದೊಂದು ಟನೆಲ್ ಬಳಸಿ ಆಚೆ ಬಂದಾಗಲೆಲ್ಲ ಒಂದು ಹೊಸ ಲೋಕ ನಮ್ಮನ್ನು ಸ್ವಾಗತಿಸೋ ಹಾಗಿತ್ತು. ಕಣ್ಣು ಹಾಯಿಸಿದ ಕಡೆಯಲೆಲ್ಲ ಎತ್ತರವಾದ ಬೆಟ್ಟಗಳ ಸಾಲುಗಳೇ, ಮಳೆಯಿಂದ ಎಲ್ಲೆಲ್ಲೂ ಉಂಟಾದ ಜಲಪಾತಗಳ ನಾದಗಳೇ !
ಸಾಯಂಕಾಲ ೫ ಗಂಟೆ, ದೂಧ್ ಸಾಗರ್ ರೈಲು ನಿಲ್ದಾಣದ ನಾಮ ಫಲಕ ಕಣ್ಣಿಗೆ ಬಿತ್ತು. ದಿನದ ಪಿಕ್ಕ್ನಿಕ್ ಮುಗಿಸಿ ವಾಪಸ್ಸು ರೈಲಿನಲ್ಲಿ ಹೋಗೋಕೆ ನೂರಾರು ಜನರು ಕಾಯುತಿದ್ದರು. ರೈಲು ನಿಲ್ದಾಣದಿಂದ ೧ ಕಿ.ಮೀ ನಡೆದು ೧೧ ನೆಯ ಟನೆಲ್ ದಾಟಿ ಆಚೆ ಬಂದಾಗ ಕಣ್ಣಿಗೆ ಕಾಣೋದೆ ದೂಧ್ ಸಾಗರ್ ಮನಮೋಹಕ ಜಲಪಾತ. ಮಾಂಡೋವಿ ನದಿ ಮೈದುಂಬಿ ರಮಣೀಯವಾಗಿ ಹರಿಯುತಿದ್ದಳು.
ದಿನದ ಆಯಸವೆಲ್ಲ ಕ್ಷಣ ಮಾತ್ರದಲ್ಲಿ ಹೊರಟೇ ಹೊಯ್ತು. ಜಲಪಾತದ ಸೊಬಗಿಗೆ ಕುಣಿದು ಕುಪ್ಪಳಿಸಿ ಕೇಕೆ ಹಾಕದೆ ಇದ್ದವರು ಯಾರೂ ಇರಲಿಲ್ಲ.
ದಿನದ ಆಯಸವೆಲ್ಲ ಕ್ಷಣ ಮಾತ್ರದಲ್ಲಿ ಹೊರಟೇ ಹೊಯ್ತು. ಜಲಪಾತದ ಸೊಬಗಿಗೆ ಕುಣಿದು ಕುಪ್ಪಳಿಸಿ ಕೇಕೆ ಹಾಕದೆ ಇದ್ದವರು ಯಾರೂ ಇರಲಿಲ್ಲ.
ಮೊದಲೇ ನಮ್ಮ ಕೆಲ ಸಹ-ಚಾರಣಿಗರು ಮೊದಲೇ ಬಂದು ನಮಗಾಗಿ ಸ್ಥಳ ಕಾಯ್ದಿರಿಸಿದ್ದರು. ಕೊಂಡೊಯ್ದಿದ್ದ ಟೆಂಟ್ ಗಳನ್ನೂ ಅಲ್ಲಿ ಸ್ಥಾಪಿಸಿ, ಲಗೇಜ್ ಇಟ್ಟು, ಮತ್ತೆ ಜಲಪಾತದ ಸೊಬಗನ್ನು ಸವಿಯಲು ಹೋದೆವು. ಇನ್ನೊಂದು ಮುಖ್ಯವಾದ ವಿಶೇಷತೆಯಂದರೆ ಜಲಪಾತವನ್ನು ತೀರ ಹತ್ತಿರದಿಂದ ಆಸ್ವಾದಿಸಬಹುದು. ಮನಸಾರೆ ಸವಿಯನ್ನುಂಡಿ ಟೆಂಟ್ ಸೇರಿಕೊಂಡೆವು.
ಅತೀ ದುಃಖದ ವಿಷಯವೆಂದರೆ ಅಂತಹ ಸುಂದರ ಪ್ರಕೃತಿಯ ಮಡಿಲನ್ನು ಜನರು ಕುಡಿತ, ಮೋಜು ಮಸ್ತಿಯ ತಾಣವನ್ನಾಗಿಸಿದ್ದಾರೆ. ನನ್ನ ಜೀವನದಲ್ಲಿ ಕಂಡ ಮೊದಲ ಕಹಿ ಅನುಭವ. ಜನರು ರಾಜಾರೋಷವಾಗಿ ಸಾರ್ವಜನಿಕ ಸ್ಥಳದಲ್ಲೇ ಕುಡಿಯುತ್ತಿದ್ದರು. ಅದಷ್ಟೇಯಲ್ಲದೆ ಎಲ್ಲಿ ನೋಡಿದರು ಪ್ಲಾಸ್ಟಿಕ್ ಕಸದ ಸಾಮ್ರಾಜ್ಯವೇ! ಹಾಗೆಯೇ ಎತ್ತ ನೋಡಿದರು ಕಸದ ರಾಶಿಯೇ, ಅವ್ಯವಸ್ಥೆಯ ಗೂಡು. ಎಂತಹ ಸುಂದರ ತಾಣವನ್ನು ಇಷ್ಟರ ಮಟ್ಟಿಗೆ ಗಲೀಜು ಮಾಡುತಿರುವರಲ್ಲ ಅಂತ ಬೇಸರ. ಅಲ್ಲಿ ಕಂಡವರೆಲ್ಲ ಸುಶಿಕ್ಷಿತರೇ, ಬಹಳಷ್ಟು ಜನ ನಗರವಾಸಿಗಳೇ ಆದರೆ ನಡತೆ ವರ್ತನೆ ಅಸಹ್ಯವಾಗಿತ್ತು. ಅವರು ಆಡುವ ಆಟಗಳಿಗೆ ಲಗಾಮು ಹಾಕುವವರೇ ಯಾರು ಇರಲಿಲ್ಲ.
ವರುಷಧಾರೆ ಇನ್ನು ಸುರಿಯುತ್ತಲೇ ಇತ್ತು. ಎಲ್ಲರು ಟೆಂಟ್ ಗಳನ್ನು ಸೇರಿಕೊಂಡು ತಂದಿದ್ದ ಬುತ್ತಿಯಲ್ಲೆ ರಾತ್ರಿ ಊಟ ಮುಗಿಸಿದೆವು. ರಾತ್ರಿ ಇಡೀ ಮಳೆ ಸುರಿಯುತ್ತಲೇ ಇತ್ತು. ಮೊದಲದಿನ ಹದಿನಾರು ಕಿ.ಮೀ ನಡೆದು ಸುಸ್ತಾಗಿತ್ತಾದ್ದರಿಂದ ನಿದ್ರಾದೇವಿ ತನ್ನ ತೆಕ್ಕೆಗೆ ನಮ್ಮನ್ನು ಬಹು ಬೇಗನೆ ತೆಗೆದುಕೊಂಡಳು..
07.07.2013
ಎಚ್ಚರವಾದಾಗ ಹೊರಗಡೆ ಜನರ ಕೇಕೆ ಜೋರಾಗಿಯೇ ಕೇಳಿಸುತಿತ್ತು. ಸಮಯ ಬೆ. ೬, ಜನ ಜಾತ್ರೆ ಇನ್ನು ಹೆಚ್ಚಾಗಿತ್ತು. ಆಶ್ಚರ್ಯದ ಸಂಗತಿಯೆಂದರೆ ಆ ಬೆಳಗಿನ ಜಾವದಲ್ಲೇ ಜನ ಸಾರಾಯಿಯನ್ನು ಜ್ಯೂಸು ತರಹ ಸೇವಿಸುತ್ತಿದ್ದರು. ಬೆಳಗಿನ ಕಾರ್ಯಕ್ರಮಗಳು ಮುಗಿಸಿ ಬ್ರೆಡ್ ಜಾಮ್ ತಿಂದು ಕೂಲೆಂ ನತ್ತ ಪ್ರಯಾಣ ಬೆಳೆಸಿದೆವು.
07.07.2013
ಎಚ್ಚರವಾದಾಗ ಹೊರಗಡೆ ಜನರ ಕೇಕೆ ಜೋರಾಗಿಯೇ ಕೇಳಿಸುತಿತ್ತು. ಸಮಯ ಬೆ. ೬, ಜನ ಜಾತ್ರೆ ಇನ್ನು ಹೆಚ್ಚಾಗಿತ್ತು. ಆಶ್ಚರ್ಯದ ಸಂಗತಿಯೆಂದರೆ ಆ ಬೆಳಗಿನ ಜಾವದಲ್ಲೇ ಜನ ಸಾರಾಯಿಯನ್ನು ಜ್ಯೂಸು ತರಹ ಸೇವಿಸುತ್ತಿದ್ದರು. ಬೆಳಗಿನ ಕಾರ್ಯಕ್ರಮಗಳು ಮುಗಿಸಿ ಬ್ರೆಡ್ ಜಾಮ್ ತಿಂದು ಕೂಲೆಂ ನತ್ತ ಪ್ರಯಾಣ ಬೆಳೆಸಿದೆವು.
ಈ ದಿನವು ಸಹ ಎಲ್ಲರೂ ಉತ್ಸಾಹದಿಂದ ಹೆಜ್ಜೆ ಹಾಕಿದೆವು. ಒಂದು ಕಿ.ಮೀ ಕ್ರಮಿಸಿದ ನಂತರ ಜಲಪಾತದ ವ್ಯೂ ಪಾಯಿಂಟ್ ಗೆ ಬಂದೆವು. ಮಂಜು ಮಳೆಯಿಂದಾಗಿ ಸಂಪೂರ್ಣ ಜಲಪಾತದ ದೃಶ್ಯ ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ೪ ಕಿ. ಮೀ ರೈಲು ಹಳಿಗಳ ಮೇಲೆ ಸಾಗಿ ಸೋನಾಲಿಯುಂ ನಿಲ್ದಾಣ ಸೇರಿದೆವು. ಬಾಕಿ ಉಳಿದ ಅಲ್ಪ ಸ್ವಲ್ಪ ತಿಂಡಿಗಳನ್ನು ಪರಸ್ಪರ ಹಂಚಿಕೊಂಡು, ಸ್ವಲ್ಪ ಹೊತ್ತು ವಿಶ್ರಾಂತಿ ತಗೊಂಡು ಮುಂದೆ ಪ್ರಯಾಣ ಬೆಳೆಸಿದೆವು.
ಸೋನಲಿಯಮ ನಿಲ್ದಾಣದಿಂದ ನೂರು ಹೆಜ್ಜೆ ಮುಂದೆ ಸಾಗಿ ಬಲಕ್ಕೆ ತಿರುಗಿ ಹಳಿಗಳಿಂದ ಕೆಳಗಿಳಿದರೆ ಜೀಪು ದಾರಿ ಕಾಡಿನೊಳಗೆ ಸಾಗುತ್ತದೆ. ಹಳಿಗಳಿಂದ ಸ್ವಲ್ಪ ಚೇಂಜ್ ಗೋಸ್ಕರ ಕಾಡು ದಾರಿ ಹಿಡಿದು ಸಾಗಿದೆವು. ನಿರಂತರ ಮಳೆ ಸುರಿಯುತಿದ್ದರಿಂದ ಎಲ್ಲೆಲ್ಲಿಯೂ ನೀರು ಹರಿಯುತ್ತಲೇ ಇತ್ತು. ತುಸು ದೂರ ಸಾಗಿದರೆ ಒಂದು ಹೊಳೆ ಎದುರಾಯಿತು. ಮೊಳಕಾಲವರೆಗಿನ ನೀರಿನಲ್ಲಿ ಸಾಗಿ ಎಲ್ಲರು ದಡ ಸೇರಿದೆವು.
ಹಾಗೆಯೇ ಅಲ್ಲಿಂದ ಮೂರರಿಂದ ನಾಲ್ಕು ಕಿ.ಮೀ. ಸಾಗಿ ಮತ್ತೆ ರೈಲು ಹಳಿಯ ದಾರಿಗೆ ಬಂದು ಸೇರಿದೆವು. ದಾರಿಯುದ್ದಕ್ಕೂ ದ್ವಿಚಕ್ರ ವಾಹನಗಳಲ್ಲಿ ಜನ ಹಿಂಡು ಹಿಂಡಾಗಿ ಹೋಗುತ್ತಿದ್ದರು. ತದನಂತರ ಗೊತ್ತಾಗಿದ್ದು ಕೂಲೆಂನಿಂದ ಬಾಡಿಗೆ ಗಾಡಿ ಮತ್ತು ಸವಾರನೊಂದಿಗೆ ಜನ ಜಲಪಾತ ವೀಕ್ಷಿಸಲು ಹೋಗುತ್ತಿದ್ದರು. ಅವರ ವಾಹನ ಚಾಲನೆ ಮೆಚ್ಚಬೇಕಾದದ್ದೇ!.
ಹಾಗೆಯೇ ಅಲ್ಲಿಂದ ಮೂರರಿಂದ ನಾಲ್ಕು ಕಿ.ಮೀ. ಸಾಗಿ ಮತ್ತೆ ರೈಲು ಹಳಿಯ ದಾರಿಗೆ ಬಂದು ಸೇರಿದೆವು. ದಾರಿಯುದ್ದಕ್ಕೂ ದ್ವಿಚಕ್ರ ವಾಹನಗಳಲ್ಲಿ ಜನ ಹಿಂಡು ಹಿಂಡಾಗಿ ಹೋಗುತ್ತಿದ್ದರು. ತದನಂತರ ಗೊತ್ತಾಗಿದ್ದು ಕೂಲೆಂನಿಂದ ಬಾಡಿಗೆ ಗಾಡಿ ಮತ್ತು ಸವಾರನೊಂದಿಗೆ ಜನ ಜಲಪಾತ ವೀಕ್ಷಿಸಲು ಹೋಗುತ್ತಿದ್ದರು. ಅವರ ವಾಹನ ಚಾಲನೆ ಮೆಚ್ಚಬೇಕಾದದ್ದೇ!.
ಹಳಿಗಳ ಮೇಲೆ ಮತ್ತೆ ನಾಲ್ಕು ಕಿ.ಮೀ ಪಯಣದ ನಂತರ ಸುಂದರ ಚಿಕ್ಕ ಜಲಪಾತ ತಲುಪಿದೆವು. ಸುಮಾರು ಎರಡು ಗಂಟೆಗಳ ಕಾಲ ನೀರಲ್ಲಿ ಕುಣಿದಾಡಿದೆವು. ನಮ್ಮ ಉತ್ಸಾಹಕ್ಕೆ ಮಿತಿಯೇ ಇರಲಿಲ್ಲ.
ಅಲ್ಲಿಂದ ಮುಂದೆ ಕೊನೆಯ ಹಂತ ಸೇರಿದ್ದು ಕೊಲಂ ರೈಲು ನಿಲ್ದಾಣ. ಒದ್ದೆಯಾದ ಬಟ್ಟೆಗಳನ್ನು ಬದಲಿಸಿಕೊಂಡು ಬಿಸಿ ಬಿಸಿ ಬಜ್ಜಿಯ ಜೊತೆಗೆ ಚಹಾ ಕುಡಿದು ಐದು ಗಂಟೆಗೆ ರೈಲು ಹತ್ತಿ ಲೊಂಡಕ್ಕೆ ಪ್ರಯಾಣ ಬೆಳೆಸಿದೆವು.
ಅಲ್ಲಿಂದ ಮುಂದೆ ಕೊನೆಯ ಹಂತ ಸೇರಿದ್ದು ಕೊಲಂ ರೈಲು ನಿಲ್ದಾಣ. ಒದ್ದೆಯಾದ ಬಟ್ಟೆಗಳನ್ನು ಬದಲಿಸಿಕೊಂಡು ಬಿಸಿ ಬಿಸಿ ಬಜ್ಜಿಯ ಜೊತೆಗೆ ಚಹಾ ಕುಡಿದು ಐದು ಗಂಟೆಗೆ ರೈಲು ಹತ್ತಿ ಲೊಂಡಕ್ಕೆ ಪ್ರಯಾಣ ಬೆಳೆಸಿದೆವು.
ದೂಧ್ ಸಾಗರ್ ನಿಲ್ದಾಣದಿಂದಲೇ ಹಾದು ಹೋಗುವ ಈ ರೈಲಿಗೆ ನೂಕುನುಗ್ಗಲು. 'ಸೀಸನ್ನಲ್ಲಾದರು ಒಂದು ವಿಶೇಷ ರೈಲಿನ ವ್ಯವಸ್ಥೆ ಮಾಡಬಾರದ ಸರಕಾರ ಜನರಿಗೊಸ್ಕರ ಅನುಕೂಲಕ್ಕೆ ಅಂತ ಗೊಣಗಾಡ್ತಾ ಇರೋದು ನಿಜವೆನಿಸುತ್ತಿತ್ತು. ಇಷ್ಟೊಂದು ರಮಣೀಯ ತಾಣಕ್ಕೆ ಸರಿಯಾದ ಸಂಪರ್ಕಸಾಧನವಿಲ್ಲ, ಮೂಲಭೂತ ವ್ಯವಸ್ಥೆಗಳಿಲ್ಲ, ಜನರ ಸ್ವೇಚ್ಛೆಗಳಿಗೆ ಲಗಾಮು ಹಾಕುವರಂತು ಇಲ್ವೆ ಇಲ್ಲ.
ಲೊಂಡ ತಲುಪಿದಾಗ ರಾತ್ರಿ ಏಳು ಗಂಟೆ. ನಿಲ್ದಾಣದಲ್ಲೇ ಪಾವ್ ಭಜ್ಜಿ ತಿಂದು ರಾಣಿ ಚೆನ್ನಮ್ಮ ರೈಲು ಹತ್ತಿದಾಗ ರಾತ್ರಿ 9. ಸೋಮವಾರ ಬೆಳಿಗ್ಗೆ 7 ಗಂಟೆಗೆ ಯಶವಂತಪುರ ಇಳಕೊಂಡು ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿ ಮನೆಯತ್ತ ಪ್ರಯಾಣ ಬೆಳೆಸಿದೆ.
ದೂಧ್ ಸಾಗರ್ ರಮಣೀಯ ದೃಶ್ಯ, ಹಚ್ಚ ಹಸಿರಿನ ಸೊಬಗು ಒಂದು ಕಡೆ ಕಾಡುತಿದ್ದರೆ ಅಲ್ಲಿನ ಅವ್ಯವಸ್ಥೆಯ ಆಗರತೆ ಮನಸನ್ನು ಬಾರಿ ಬಾರಿ ಚುಚ್ಚುತಿದೆ.
ದೂಧ್ ಸಾಗರ್ ತಂಡ
ವೀಡಿಯೊ ಕೃಪೆ: ಶಿವ
https://www.youtube.com/watch? v=hf8dLRKcUNw
ದೂಧ್ ಸಾಗರ್ ತಂಡ
ವೀಡಿಯೊ ಕೃಪೆ: ಶಿವ
https://www.youtube.com/watch?
ಧನ್ಯವಾದಗಳು:
ಮೊಹಮ್ಮದ್ ರಫಿ ಈ ಚಾರಣಕ್ಕೆ ಅನುವು ಮಾಡಿಕೊಟ್ಟಿದ್ದಕ್ಕೆ
ಎಲ್ಲ ೩೦ ಸಹ ಚಾರಣಿಗರು ಮಾರ್ಗದುದ್ದಕ್ಕೂ ಸಹಕರಿಸಿದ್ದಕ್ಕಾಗಿ
ಅಶುತೋಷ್ ನನ್ನ ವಿನಂತಿಯ ಮೇರೆಗೆ ಟೆಂಟ್ ಬಾಡಿಗೆಯಾಗಿ ತಂದದ್ದಕ್ಕಾಗಿ
ಫೋಟೋ ಕೃಪೆ: ಶಿವ, ಅಶುತೋಷ್, ರಫಿ
ಫೋಟೋ ಕೃಪೆ: ಶಿವ, ಅಶುತೋಷ್, ರಫಿ
ಪಲ್ಲವಿ ರಂಗನಾಥ್ ಮತ್ತು ಹೇಮಾ ಕನ್ನಡದಲ್ಲಿ ಬರೆಯುವಂತೆ ಪ್ರೋತ್ಸಹಿಸಿದ್ದಕ್ಕಾಗಿ
ದೂಧ್ ಸಾಗರ್ ರೈಲ್ವೆ ಹಳಿಯ ಚಾರಣ
Reviewed by Vidya S
on
July 06, 2013
Rating:
No comments: